ಮೊದಲ ಮಾತು

Preface

ಅನೇಕ ಸಹೋದರರು ತಮ್ಮ ಸಂಗೀತಗಳನ್ನು ರಚಿಸಿ ಈ ಸಂಗೀತ ಪುಸ್ತಕದಲ್ಲಿ ಸೇರಿಸಲು ತಮ್ಮ ಸಹಕಾರವನ್ನು ನೀಡಿದ್ದಕ್ಕೆ ನಾವು ತುಂಬಾ ಋಣಿಯಾಗಿದ್ದೇವೆ. ಇದಲ್ಲದೆ ಬೇರೆ ಭಕ್ತರು ರಚಿಸಿದ ಸಂಗೀತಗಳೂ ಇದರಲ್ಲಿವೆ. ಅವರೆಲ್ಲರಿಗೂ ನಮ್ಮ ವಂದನೆಗಳು.

ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಸಂಗೀತಗಳಿಂದಲೂ ಸಾರುವ ಸದಾವಕಾಶವು ದೇವರ ಮಕ್ಕಳಿಗೆ ಇದೆ ಎಂಬುದು ಅನುಭವ ಸಿದ್ಧಾಂತದ ಮಾತು. ದೇವರ ಎಷ್ಟೋ ಸೇವಕರುಗಳು ಅನುಭವದಿಂದ ರಚಿಸಿದ ಸಂಗೀತಗಳು ಸಾವಿರಾರು ಜನರನ್ನು ಕ್ರಿಸ್ತನ ಶಿಲುಬೆಯಡಿಗೆ ನಡಿಸಿವೆ ಎಂದು ಆನಂದದಿಂದಲೇ ಹೇಳುತ್ತೇವೆ, ಡಿ.ಎಲ್. ಮೂಡಿ ಎಂಬ ದೇವರ ಸೇವಕರು ತಮ್ಮ ಕಾಲದಲ್ಲಿ ಸುವಾರ್ತೆಯನ್ನು ಸಾರಿ ಎಷ್ಟೋ ಜನರನ್ನು ಕ್ರಿಸ್ತನಿಗಾಗಿ ಗೆದ್ದುಕೊಂಡರು. ಆದರೆ ಅವರ ಜೊತೆಯಲ್ಲಿದ್ದು ಸಂಗೀತಗಳನ್ನು ರಚಿಸಿ ಹಾಡುತ್ತಿದ್ದ ಸೇಂಕಿ ಎಂಬ ಭಕ್ತರೂ ಸಂಗೀತಗಳ ಮೂಲಕ ಸುವಾರ್ತೆಯನ್ನು ಸಾರಿದರೆಂದು ನಾವು ತಿಳಿಯುತ್ತೇವೆ.

ಸಂಗೀತಗಳು ಎಷ್ಟೋ ಜನರ ಕಲ್ಲಾದ ಹೃದಯಗಳನ್ನು ಕರಗಿಸಿವೆ; ನಿರಾಶೆಯಿಂದೆ ಇದ್ದ ಹೃದಯಗಳಲ್ಲಿ ಜ್ಯೋತಿಯನ್ನು ಬೆಳಗಿವೆ. ಸಂಗೀತಗಳಲ್ಲಿ ಜೋಡಣೆಯಾಗಿರುವ ಮಾತುಗಳು ಜನರ ಸಂಗಡ ಹೃದಯಂಗಮವಾಗಿ ಮಾತನಾಡಿವೆ. ಯೇಸು ಕ್ರಿಸ್ತನ ಅಚಲವಾದ ಪ್ರೀತಿಯನ್ನು ವಿವರಿಸುವ ಮಧುರವಾದ ಸಂಗೀತಗಳು ದೇವರ ವಾಕ್ಯಗಳನ್ನು ಅಂಗೀಕರಿಸುವಂತೆ ಹೃದಯಗಳನ್ನು ಸಿದ್ಧಮಾಡುವಂಥವುಗಳು ಆಗಿವೆ.

ಎಷ್ಟೋ ವಿಶ್ವಾಸಿಗಳು ಶೋಧನೆಗಳಲ್ಲಿ ಬಿದ್ದು ಹಿಂಜರಿದು ಹೋಗಿದ್ದರೂ ಸಂಗೀತಗಳು ಅಂಥವರನ್ನು ಆಗಾಗ್ಗೆ ಎಚ್ಚರಿಸಿ ಅವರು ಯಥಾಸ್ಥಾನ ಹೊಂದುವಂತೆ ಸಹಾಯಮಾಡಿವೆ. ಇನ್ನು ಕೆಲವರು ಕುಡಿಕತನದಿಂದ ದುರಿತ ಸಂಕಟಗಳಿಂದ ನೊಂದು ಕುಂದಿಹೋದವರು; ಸ್ನೇಹಿತರಿಂದ ನಿರಾಶೆಗೊಂಡವರು; ಕಾಯಿಲೆಗಳಿಂದ ಕೊರಗುತ್ತಿರುವವರು; ದುಃಖ ಸಾಗರದಲ್ಲಿ ಮುಳುಗುತ್ತಿರುವವರು; ಇಂಥ ಎಲ್ಲಾ ಜನರನ್ನು ಸಂಗೀತಗಳು ಸಂತೈಸಿವೆ, ಆದರಿಸಿವೆ, ಕಣ್ಣೀರನ್ನು ಒರಸಿವೆ, ಹೊಸ ಧೈರ್ಯವನ್ನು ಕೊಟ್ಟಿವೆ ಮತ್ತು ಯಥಾಸ್ಥಾನ ಪಡಿಸಿವೆ. ಪೌಲ ಸೀಲರು ಆ ಮಧ್ಯರಾತ್ರಿಯಲ್ಲೂ ಸ್ತುತಿಪದಗಳನ್ನು ಹಾಡಿದರೆಂದು ಅ.ಕೃ 16:25ರಲ್ಲಿ ನೋಡುತ್ತೇವೆ. ಅವರ ಬೆನ್ನುಗಳಿಗೆ ಚಡಿಗಳ ಪೆಟ್ಟುಗಳು ಬಿದ್ದಿದ್ದವು, ಕೈಕಾಲುಗಳಿಗೆ ಬೇಡಿಗಳು, ಸೆರೆಮನೆಯ ವಾಸ ಇವುಗಳು ಅವರ ಸಂಗೀತವನ್ನು ನಿಲ್ಲಿಸಲಾರದೆ ಹೋದವು. ಹಾ! ದೇವರ ಮಕ್ಕಳ ಆನಂದ ಎಂಥಾ ಆನಂದ.!

ನಾವು ಎಲ್ಲಾ ಕಾಲದಲ್ಲೂ ಸಂಗೀತ ಹಾಡೋಣ. "ಆದರೆ ಪವಿತ್ರಾತ್ಮಭ ರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬ ರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಯೇಸು ಕ್ರಿಸ್ತನ ಹೆಸ ರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಕ್ರಿಸ್ತನಿಗೆ ಭಯಪಡುವವರಾಗಿದ್ದು ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ" (ಎಫೆಸ 5:19-20).

"ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಸಕಲ ಜ್ಞಾನದಿಂದ ಕೂಡಿದವರಾಗಿ ಒಬ್ಬರಿಗೊಬ್ಬರು ಉಪದೇಶ ಮಾಡಿಕೊಳ್ಳಿರಿ, ಬುದ್ಧಿ ಹೇಳಿಕೊಳ್ಳಿರಿ; ಕರ್ತನ ಕೃಪೆಯನ್ನು ನೆನೆಸಿಕೊಳ್ಳುವವರಾಗಿ ಕೀರ್ತನೆಗಳಿಂದಲೂ ಆತ್ಮಸಂಬಂಧವಾಗಿರುವ ಹಾಡುಗಳಿಂದಲೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಗಾನಮಾಡಿರಿ" (ಕೊಲೊಸ್ಸೆ 3:16).

ಬಿ. ಸುಮಂತ್